ಇತ್ತೀಚಿನ ಸುದ್ದಿ

ಪಾಕಿಸ್ತಾನಕ್ಕೆ ಸಾಲ ನೀಡುವ ಐಎಂಎಫ್ ವೋಟಿಂಗ್​ನಲ್ಲಿ ಭಾರತ ಮತದಾನ ಮಾಡದ್ದು ಯಾಕೆ?

ನವದೆಹಲಿ, ಮೇ 10: ಭಾರತದ ತೀವ್ರ ವಿರೋಧದ ನಡುವೆ ಕೊನೆಗೂ ಪಾಕಿಸ್ತಾನಕ್ಕೆ 1 ಬಿಲಿಯನ್ ಡಾಲರ್‌ಗಳ ಸಾಲ ನೀಡಲು ಅಂತಾರಾಷ್ಟ್ರೀಯ ಹಣಕಾಸು ನಿಧಿ (IMF) ಸಮ್ಮತಿಸಿದೆ. ಪಾಕಿಸ್ತಾನಕ್ಕೆ ಸಾಲ ನೀಡುವ ಪ್ರಸ್ತಾವನೆಯನ್ನು ಮತಕ್ಕೆ ಹಾಕಿದ ಸಂದರ್ಭದಲ್ಲಿ ಭಾರತ ಮಾತ್ರ ವೋಟಿಂಗ್ ಮಾಡದೆ ದೂರವುಳಿದಿದೆ. ಐಎಂಫ್ ನಿರ್ಧಾರವನ್ನು ವಿರೋಧಿಸುವುದಕ್ಕಾಗಿ ಭಾರತ ಈ ನಿರ್ಧಾರ ಕೈಗೊಂಡಿತ್ತು ಎಂದು ಸರ್ಕಾರಿ ಮೂಲಗಳು ತಿಳಿಸಿವೆ. ಅಲ್ಲದೆ, ಮತ ಹಾಕದೆ ಉಳಿದಿದ್ದರ ಹಿಂದೆ ಇನ್ನೂ ಕೆಲವು ತಾಂತ್ರಿಕ ಕಾರಣಗಳಿವೆ ಎಂದು ತಿಳಿಸಿವೆ. ಹಾಗಾದರೆ ಆ ಕಾರಣಗಳೇನು? ಕೇಂದ್ರ ಸರ್ಕಾರದ ಮೂಲಗಳು ತಿಳಿಸಿದ್ದೇನು ಎಂಬ ವಿವರಗಳು ಇಲ್ಲಿವೆ.

ಐಎಂಫ್​ ಕಾರ್ಯಕಾರಿ ಮಂಡಳಿಯು ಸದಸ್ಯ ರಾಷ್ಟ್ರಗಳನ್ನು ಪ್ರತಿನಿಧಿಸುವ 25 ನಿರ್ದೇಶಕರನ್ನು ಒಳಗೊಂಡಿದೆ. ಇದು ಸಾಲ ಅನುಮೋದನೆಗಳು ಸೇರಿದಂತೆ ದೈನಂದಿನ ಕಾರ್ಯಾಚರಣೆಯ ವಿಷಯಗಳನ್ನು ನಿರ್ವಹಿಸುತ್ತದೆ. ಇಲ್ಲಿ ವಿಶ್ವಸಂಸ್ಥೆಯಂತೆ ಪ್ರತಿ ಸದಸ್ಯ ದೇಶಕ್ಕೆ ಒಂದು ಮತ ಎಂಬ ನಿಯಮ ಇಲ್ಲ. ಸದಸ್ಯರ ಆರ್ಥಿಕ ಗಾತ್ರಕ್ಕೆ ಅನುಗುಣವಾಗಿ ಹೆಚ್ಚು ಮತ ಚಲಾಯಿಸುವ ಅವಕಾಶ ಇರುತ್ತದೆ. ಉದಾಹರಣೆಗೆ; ಅಮೆರಿಕದಂತಹ ದೇಶಗಳು ಹೆಚ್ಚಿನ ಮತದಾನದ ಪಾಲನ್ನು ಹೊಂದಿವೆ. ಹೀಗಾಗಿ ಐಎಂಎಫ್​ ಒಮ್ಮತದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.

ಸಾಲದ ನಿಲುವಳಿಗೆ ಮತ ಹಾಕಬೇಕಾದ ಸಂದರ್ಭ ಬಂದಾಗ ಪರವಾಗಿಯೇ ಚಲಾಯಿಸಬೇಕು. ಒಂದು ವೇಳೆ ಅದಕ್ಕೆ ವಿರೋಧ ಇದ್ದರೆ, ವಿರುದ್ಧ ಮತ ಚಲಾಯಿಸಲು ಐಎಂಎಫ್​ ನಿಯಮಗಳಲ್ಲಿ ಅವಕಾಶ ಇಲ್ಲ. ಇಂಥ ಸಂದರ್ಭಗಳಲ್ಲಿ ಮತದಾನದಿಂದ ದೂರ ಉಳಿಯಬಹುದು. ಹೀಗಾಗಿ ಭಾರತವೂ ಐಎಂಫ್ ನಿಲುವು ವಿರೋಧಿಸಿ ಮತದಾನದಿಂದ ದೂರ ಉಳಿದಿದೆ ಎಂದು ಭಾರತ ಸರ್ಕಾರದ ಮೂಲಗಳು ತಿಳಿಸಿವೆ.

ಮತದಾನದಿಂದ ದೂರ ಉಳಿಯುವ ಮೂಲಕ ಭಾರತ ತೀವ್ರ ಅಸಮ್ಮತಿಯನ್ನು ವ್ಯಕ್ತಪಡಿಸಿದೆ. ಇಷ್ಟೇ ಅಲ್ಲದೆ, ಔಪಚಾರಿಕವಾಗಿ ಆಕ್ಷೇಪಣೆಗಳನ್ನು ದಾಖಲಿಸಿದೆ. ಕಳೆದ 35 ವರ್ಷಗಳ ಅವಧಿಯಲ್ಲಿ 28 ಬಾರಿ ಪಾಕಿಸ್ತಾನಕ್ಕೆ ಐಎಂಎಫ್​ ಬೆಂಬಲ ಸಿಕ್ಕಿದೆ. ಇದನ್ನು ಪಾಕಿಸ್ತಾನ ಸರಿಯಾಗಿ ಬಳಸಿಕೊಂಡಿಲ್ಲ ಎಂದು ಭಾರತ ಪ್ರತಿಪಾದಿಸಿದೆ. ಜತೆಗೆ, ಆರ್ಥಿಕ ವ್ಯವಹಾರಗಳಲ್ಲಿ ಪಾಕಿಸ್ತಾನಿ ಸೇನೆಯ ಮುಂದುವರಿದ ಪ್ರಾಬಲ್ಯವನ್ನು ಭಾರತ ಬಲವಾಗಿ ಎತ್ತಿ ತೋರಿಸಿದೆ.

ಗಡಿಯಾಚೆಗಿನ ಭಯೋತ್ಪಾದನೆ ಬೆಂಬಲಿಸುವ ದೇಶಕ್ಕೆ ಹಣಕಾಸು ನೆರವು ಒದಗಿಸುವುದು ಸರಿಯಲ್ಲ. ಅಂಥ ದೇಶಕ್ಕೆ ಸಹಾಯ ಮಾಡಿದಲ್ಲಿ ಐಎಂಫ್​​ನಂಥ ಸಂಸ್ಥೆಯ ವಿಶ್ವಾಸಾರ್ಹತೆಗೇ ಹೊಡೆತ ಬೀಳಲಿದೆ ಎಂದು ಭಾರತ ಹೇಳಿದೆ.

Related Articles

Leave a Reply

Your email address will not be published. Required fields are marked *

Back to top button