
ಸುಲಿಗೆ ಆರೋಪದ ಮೇಲೆ ಆರ್.ಟಿ. ನಗರ ಪೊಲೀಸ್ ಠಾಣೆಯ ಕಾನ್‌ಸ್ಟೆಬಲ್‌ಗಳನ್ನು ಬಂಧಿಸಲಾಗಿದೆ. ಜಿಎಸ್‌ಟಿ ಬಿಲ್ ಖರೀದಿಗೆ ಬಂದಿದ್ದ ಅಕೌಟೆಂಟ್‌ಗೆ ಬೆದರಿಸಿ 6 ಲಕ್ಷ ರೂ. ಸುಲಿಗೆ ಮಾಡಿದ್ದ ಚಿಕ್ಕಜಾಲ ಠಾಣೆ ಹೆಡ್ ಕಾನ್‌ಸ್ಟೆಬಲ್ ವಿಜಯ್‌ಕುಮಾರ್, ಕಾನ್‌ಸ್ಟೆಬಲ್‌ಗಳಾದ ಸಂತೋಷ್, ಮಂಜುನಾಥ್ ಮತ್ತು ಯೂಟ್ಯೂಬರ್ ಪ್ರವೀಣ್ ಬಂಧಿತರು. ಸಹಕಾರ ನಗರದ ಅಕೌಂಟೆಂಟ್ ನಾಗರಾಜು ಎಂಬಾತನಿಗೆ ಬೆದರಿಸಿ ಸುಲಿಗೆ ಮಾಡಿದ್ದರು. ಈ ಕೇಸ್‌ನಲ್ಲಿ ಐವರು ಭಾಗಿಯಾಗಿದ್ದು, ಹೆಚ್ಚಿನ ತನಿಖೆಗೆ ವಿಶೇಷ ತಂಡ ರಚಿಸಲಾಗಿದೆ.
ಅಕೌಂಟೆಂಟ್ ನಾಗರಾಜು,ಜಿ ಎಸ್ ಟಿ ಪೈಲಿಂಗ್, ಐಟಿ ರಿಟರ್ನ್ ಸಲ್ಲಿಕೆ ಕೆಲಸ ಮಾಡುತ್ತಿದ್ದರು. ಖಾಸಗಿ ಕಂಪನಿಯೊಂದಕ್ಕೆ ಜಿಎಸ್‌ಟಿ ಬಿಲ್ ಬೇಕೆಂದು ಕ್ಲೈಂಟ್ ರಕ್ಷಿತ್ ಎಂಬಾತ ನಾಗರಾಜು ಬಳಿ ಕೇಳಿದ್ದ. ಅದಕ್ಕೆ ಒಪ್ಪಿಕೊಂಡ ನಾಗರಾಜು, ಜಿಎಸ್‌ಟಿ ಬಿಲ್‌ಗಾಗಿ ಪುನೀತ್ ಎಂಬಾತನ ಬಳಿ ಕೇಳಿದಾಗ ಆತ 50 ಲಕ್ಷ ರೂ. ಜಿಎಸ್‌ಟಿ ಬಿಲ್‌ಗೆ 65 ಲಕ್ಷ ರೂ. ನಗದು ಸಂದಾಯ ಮಾಡುವಂತೆ ಸೂಚಿಸಿದ್ದ. ಮೇ 5ರಂದು ನಾಗರಾಜು, ತನ್ನ ಸ್ನೇಹಿತ ಜೊತೆಯಲ್ಲಿ 50 ಲಕ್ಷ ರೂ. ನಗದು ತೆಗೆದುಕೊಂಡು ಪುನೀತ್ ಸೂಚಿಸಿದಂತೆ ಗೋಲ್ಡ್‌ಫಿಂಚ್ ರೆಸಾರ್ಟ್ ಬಳಿಗೆ ಹೋಗಿದ್ದರು. ಅಲ್ಲಿಗೆ ರಕ್ಷಿತ್ ಬಂದಿದ್ದರು. ಅಷ್ಟೊತ್ತಿಗೆ ಸಂಜೆ ಆಗಿದ್ದು, ಅದೇ ವೇಳೆಗೆ ಚಿಕ್ಕಜಾಲ ಠಾಣೆ ಪೊಲೀಸರು ಬಂದು ಅಲ್ಲಿಂದ ಕಾರಿನಲ್ಲಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಪರಿಶೀಲನೆ ನಡೆಸಿದರು. ನಗದು ನೋಡಿ ಅದರಲ್ಲಿ 6 ಲಕ್ಷ ರೂ. ಸುಲಿಗೆ ಮಾಡಿ, ಇಂತಹ ವ್ಯವಹಾರ ಮಾಡಬೇಡಿ ಎಂದು ಹೇಳಿ ಅಲ್ಲಿಂದ ಹೊರಟುಹೋದರು.
ಇದಾದ ಮೇಲೆ ಪುನೀತ್‌ಗೆ ಕರೆ ಮಾಡಿದಾಗ ಬಾಗಲೂರಿನಲ್ಲಿ ಇರುವ ಪಿ.ಜಿ. ಬಳಿಗೆ ಬರುವಂತೆ ಸೂಚಿಸಿದ್ದ. ಅಲ್ಲಿಗೂ ಹೋದಾಗ ಸಂಬಂಧಿಕರ ಸಮಾರಂಭಕ್ಕೆ ಹೋಗಬೇಕಾಗಿದೆ. ಆದರಿಂದ ಮಾರನೇ ದಿನ ಸಿಗೋಣ ಎಂದು ಹೇಳಿ ಕರೆ ಕಟ್ ಮಾಡಿದ್ದ. ಮಾರನೇ ದಿನ ಪಿ.ಜಿ. ಬಳಿಗೆ ಹೋಗಿ ಪುನೀತ್‌ಗೆ ಕರೆ ಮಾಡಿದಾಗ, ಅಲ್ಲಿಗೆ ಬರಲು ಆತ ಒಪ್ಪುವುದಿಲ್ಲ. ಕೊನೆಗೆ ಪುನೀತ್ ಸ್ಥಳಕ್ಕೆ ಬಂದು ಹಣ ಲಪಟಾಯಿಸಲು ಗ್ಯಾಂಗ್ ಕರೆತಂದಿದ್ದ. ಪಿ.ಜಿ.ಯಲ್ಲಿ ಹಣವನ್ನು ಪರಿಶೀಲನೆ ನಡೆಸಿ ಮತ್ತೆ ಕಾರಿನ ಒಳಗೆ ವ್ಯವಹಾರ ಮುಗಿಸೋಣ ಎಂದು ಹೊರಬಂದಿದ್ದರು. ಕಾರಿನ ಒಳಗೆ ಕೂರಿಸಿಕೊಂಡು ಬೇರೆಡೆ ಕರೆದುಕೊಂಡು ಹೋಗಿ ಚಾಕು ಮತ್ತು ಲಾಂಗ್ ತೋರಿಸಿ ನಾಗರಾಜು ಮತ್ತು ರಕ್ಷಿತ್‌ಗೆ ಬೆದರಿಸಿ 50 ಲಕ್ಷ ರೂ. ಸುಲಿಗೆ ಮಾಡಿ ಪರಾರಿಯಾಗಿದ್ದರು. ಈ ಬಗ್ಗೆ ನಾಗರಾಜು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿಗಳಾದ ಪೊಲೀಸರನ್ನು ಬಂಧಿಸಲಾಗಿದೆ.