
ಭಾರತ-ಇಂಗ್ಲೆಂಡ್ ಸರಣಿಯ ಹೊಸ್ತಿಲಲ್ಲಿ ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್ಗೆ ದಿಢೀರ್ ನಿವೃತ್ತಿ ಘೋಷಿಸಿದ್ದರು. ಈ ಇಬ್ಬರೂ ಆಟಗಾರರ ನಿವೃತ್ತಿಯ ಬೆನ್ನಲ್ಲೇ ಕ್ರಿಕೆಟ್ ವಲಯದಲ್ಲಿ ಭಾರೀ ಚರ್ಚೆಗಳು ನಡೆದಿವೆ. ನಿವೃತ್ತಿಗೆ ಅಸಲಿ ಕಾರಣವೇನು ಎಂದು ಫ್ಯಾನ್ಸ್ ತಲೆಗೆ ಹುಳ ಬಿಟ್ಟುಕೊಂಡಿದ್ದಾರೆ. ಇದರ ನಡುವೆಯೇ ಮತ್ತೊಬ್ಬ ಆಟಗಾರ ಅಚ್ಚರಿಯ ನಿರ್ಧಾರ ಪ್ರಕಟಿಸಿದ್ದಾರೆ.
16 ವರ್ಷಗಳ ಕಾಲ ಕ್ರಿಕೆಟ್ ಆಡಿದ್ದ ಇವರು ಹಲವು ದಾಖಲೆಗಳನ್ನು ಬರೆದವರು. ಈ ಹಿರಿಯ ಮತ್ತು ಅನುಭವಿ ಬ್ಯಾಟರ್ 2009ರಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದ ಮೂಲಕ ಟೆಸ್ಟ್‌ಗೆ ಪಾದಾರ್ಪಣೆ ಮಾಡಿದ್ದರು. ಮೊದಲ ಪಂದ್ಯದಲ್ಲೇ ಅದ್ಬುತ ಪ್ರದರ್ಶನ ನೀಡಿ, ಕ್ಲಾಸಿಕ್ ಬ್ಯಾಟಿಂಗ್ ಮೂಲಕವೇ ಅಭಿಮಾನಿಗಳ ಹೃದಯ ಗೆದ್ದಿದ್ದರು. ಈವರೆಗೂ ನೂರಕ್ಕೂ ಹೆಚ್ಚು ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ.
ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ 118 ಟೆಸ್ಟ್ ಪಂದ್ಯಗಳನ್ನಾಡಿ 44.62ರ ಸರಾಸರಿಯಲ್ಲಿ 8,167 ರನ್ ಗಳಿಸಿದ್ದಾರೆ. ಇದರಲ್ಲಿ 1 ದ್ವಿಶತಕ, 16 ಶತಕಗಳು ಮತ್ತು 45 ಅರ್ಧಶತಕಗಳಿವೆ.
ಇವರು ಮಹೇಲ ಜಯವರ್ಧನೆ ಮತ್ತು ಕುಮಾರ್ ಸಂಗಕ್ಕಾರ ಅವರಂತಹ ಕ್ರಿಕೆಟ್ ದಂತಕಥೆಗಳೊಂದಿಗೆ ಡ್ರೆಸ್ಸಿಂಗ್ ಕೋಣೆ ಹಂಚಿಕೊಂಡಿದ್ದಾರೆ. ಹೌದು, ನಾವು ಹೇಳುತ್ತಿರುವುದು ಶ್ರೀಲಂಕಾದ ಲೆಜಂಡರಿ ಕ್ರಿಕೆಟರ್ ಆ್ಯಂಜಲೋ ಮ್ಯಾಥ್ಯೂಸ್ ಬಗ್ಗೆ. ಕಳೆದ 3 ದಿನಗಳ ಹಿಂದೆ ಮ್ಯಾಥ್ಯೂಸ್ ಟೆಸ್ಟ್ ಸ್ವರೂಪಕ್ಕೆ ವಿದಾಯ ಹೇಳಿದ್ದಾರೆ.
ಸುದೀರ್ಘ ಕ್ರಿಕೆಟ್ ವೃತ್ತಿಜೀವನಕ್ಕೆ ವಿದಾಯ ಹೇಳುತ್ತಿರುವುದಾಗಿ ಮ್ಯಾಥ್ಯುಸ್ ತಿಳಿಸಿದ್ದಾರೆ. ಮುಂದಿನ ತಿಂಗಳು ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದ ನಂತರ ಅವರು ಟೆಸ್ಟ್ ಕ್ರಿಕೆಟ್‌ನಿಂದ ಹೊರಗುಳಿಯಲಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ, ವೈಟ್ಬಾಲ್ ಕ್ರಿಕೆಟ್ ಆಡುವುದನ್ನು ಮುಂದುವರಿಸುವುದಾಗಿ ಹೇಳಿದ್ದಾರೆ.