
ತಂಡ ಗೆಲ್ಲುತ್ತಿದ್ದಂತೆ ವಿರಾಟ್ ಕೊಹ್ಲಿ ಭಾವುಕರಾದರು. ಆನಂದ ಬಾಷ್ಪ ಸುರಿಸಿ ಸಂಭ್ರಮಿಸಿದರು
ಅಹಮದಾಬಾದ್: ಇಂಡಿಯನ್ ಪ್ರೀಮಿಯರ್ ಲೀಗ್ 2025ರ ಫೈನಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಂಜಾಬ್ ಕಿಂಗ್ಸ್ ಆರು ರನ್‌ಗಳಿಂದ ಸೋಲಿಸಿತು. ತಂಡ ಗೆಲ್ಲುತ್ತಿದ್ದಂತೆ ವಿರಾಟ್ ಕೊಹ್ಲಿ ಭಾವುಕರಾದರು. ಆನಂದ ಬಾಷ್ಪ ಸುರಿಸಿ ಸಂಭ್ರಮಿಸಿದರು.
ಸತತವಾಗಿ 18 ವರ್ಷಗಳ ಕಾಲ ಆರ್‌ಸಿಬಿ ಪರ ಆಡಿದ ಕೊಹ್ಲಿ: ಲೀಗ್‌ನಲ್ಲಿ ತಮ್ಮ 18 ವರ್ಷಗಳ ಕಾಲ RCB ಪರ ಮಾತ್ರ ಆಡಿದ್ದಾರೆ. ಹಾಗೆ ಆಡಿದ ಏಕೈಕ ಆಟಗಾರ ಕೊಹ್ಲಿ ಆಗಿದ್ದಾರೆ. ಅಂತಿಮ ಚೆಂಡು ಬೌಂಡರಿ ಗೆರೆಯ ಮೇಲೆ ಸಾಗುತ್ತಿದ್ದಂತೆ, ತಂಡದ ಸದಸ್ಯರು ಓಡಿ ಬಂದು ಅವರೊಂದಿಗೆ ವಿಜಯಾಚರಣೆ ಮಾಡಿದರು. ಸಹ ಆಟಗಾರರು ಕುಣಿದು ಕುಪ್ಪಳಿಸುತ್ತಿದ್ದರೆ ಅತ್ತ ಕೊಹ್ಲಿ ಕಣ್ಣೀರು ಸುರಿಸುತ್ತಾ ನೆಲದ ಮೇಲೆ ಬಿದ್ದರು. ಇದು ಸಾರ್ವಕಾಲಿಕ ಶ್ರೇಷ್ಠ ಆಟಗಾರನ ಶ್ರೇಷ್ಠ ವೃತ್ತಿಜೀವನದ ಗೆಲುವಿನ ಉಡುಗೊರೆ ಆಗಿದೆ.
ಮಾತು ಉಳಿಸಿಕೊಂಡ ಪಾಟಿದಾರ್: RCB ನಾಯಕ ರಜತ್ ಪಟಿದಾರ್ ತಮ್ಮ ತಂಡವು ಪ್ರಶಸ್ತಿಯನ್ನು ಗೆಲ್ಲಲು ಬಯಸಿದೆ ಎಂದು ಒತ್ತಿ ಹೇಳಿದ್ದರು. ಆ ಮಾತನ್ನು ಅವರು ಉಳಿಸಿಕೊಂಡಿದ್ದಾರೆ ಕೂಡಾ.
ಅಲ್ಲದೇ, ಇಂಡಿಯನ್ ಪ್ರೀಮಿಯರ್ ಲೀಗ್ 2025 ರ ಫೈನಲ್ ಪಂದ್ಯದಲ್ಲಿ ಆರ್‌ಸಿಬಿ ತಂಡದ ಮಾಜಿ ಸಹ ಆಟಗಾರ ಎಬಿ ಡಿವಿಲಿಯರ್ಸ್ ಅವರೊಂದಿಗೆ ಕೊಹ್ಲಿ ಸಂಭ್ರಮಿಸುತ್ತಿರುವುದು ಕಂಡುಬಂದಿದೆ.
ಲೀಗ್ ಪಂದ್ಯಗಳ ನಂತರ ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದ ಆರ್‌ಸಿಬಿ, 9 ವರ್ಷಗಳಲ್ಲಿ ಮೊದಲ ಬಾರಿಗೆ ಐಪಿಎಲ್ ಫೈನಲ್‌ಗೆ ಬಂದಿತ್ತು, ಕ್ವಾಲಿಫೈಯರ್ 1 ರಲ್ಲಿ ಅಗ್ರ ಶ್ರೇಯಾಂಕಿತ ಪಂಜಾಬ್ ಕಿಂಗ್ಸ್ ವಿರುದ್ಧ ಎಂಟು ವಿಕೆಟ್‌ಗಳ ಜಯ ಸಾಧಿಸಿತು. ಆದಾಗ್ಯೂ, ಪಂಜಾಬ್, ಕ್ವಾಲಿಫೈಯರ್ 2 ರಲ್ಲಿ ಮತ್ತೆ ಚೇತರಿಸಿಕೊಂಡು, ಮುಂಬೈ ಇಂಡಿಯನ್ಸ್ ಅನ್ನು ಸೋಲಿಸಿ ಪ್ರಶಸ್ತಿ ಪಂದ್ಯಕ್ಕೆ ಕಾಲಿಟ್ಟಿತ್ತು.
ಐಪಿಎಲ್ 2025 ರ ಫೈನಲ್ ಪಂದ್ಯದಲ್ಲಿ RCB ಮತ್ತು PBKS ತಮ್ಮ ಮೊದಲ ಐಪಿಎಲ್ ಟ್ರೋಫಿಗಾಗಿ ಕಾದಾಡಿದ್ದವು. ಈ ಎರಡೂ ತಂಡಗಳು ತಮ್ಮ ಇತಿಹಾಸದಲ್ಲಿ ಒಮ್ಮೆಯೂ ಚಾಂಪಿಯನ್ ಆಗಿಲ್ಲ, ಆದ್ದರಿಂದ ಈ ಪಂದ್ಯವು ಎರಡೂ ತಂಡಗಳಿಗೆ ಐತಿಹಾಸಿಕ ಕ್ಷಣವಾಗಿತ್ತು. ಅಂತಿಮವಾಗಿ ಆರ್‌ಸಿಬಿ 18 ವರ್ಷಗಳ ಬಳಿಕ ಟ್ರೋಪಿ ಎತ್ತಿ ಹಿಡಿದಿದೆ. ಈ ಮೂಲಕ ಪ್ರಶಸ್ತಿ ಬರವನ್ನು ನೀಗಿಸಿಕೊಂಡಿದೆ.
ಕರ್ನಾಟಕದ ಎಲ್ಲ ಕಡೆ ಭರ್ಜರಿಯಾಗಿ ವಿಜಯಾಚರಣೆ ನಡೆಯುತ್ತಿದೆ. ಸಿಎಂ, ಡಿಸಿಎಂ ಸೇರಿದಂತೆ ಎಲ್ಲರೂ ಅಭಿನಂದನೆಗಳ ಸುರಿ ಮಳೆಯನ್ನೇ ಹರಿಸಿದ್ದಾರೆ.