
ಅಧಿಕೃತ ದಾಖಲೆಗಳ ಹೊರತಾಗಿ ಭಾರಿ ಪ್ರಮಾಣದ ನಗದು ಹೊಂದಿದ್ದರೆ ಅದು ಕರ್ನಾಟಕ ಪೊಲೀಸ್ ಕಾಯ್ದೆ ಸೆಕ್ಷನ್ 98ರ ಪ್ರಕಾರ ಅಪರಾಧವಾಗುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಆದೇಶಿಸಿದೆ. ಕಳೆದ ಲೋಕಸಭಾ ಚುನಾವಣೆ ವೇಳೆ ಚೆಕ್ಪೋಸ್ಟ್ ನಲ್ಲಿ 8.38 ಲಕ್ಷ ನಗದು ಪತ್ತೆಯಾದ ಸಂಬಂಧ ಆಂಧ್ರ ಮೂಲದ ಆರ್. ಅಮರನಾಥ್ ವಿರುದ್ಧ ದಾಖಲಿಸಿಕೊಂಡಿದ್ದ ಪ್ರಕರಣ ರದ್ದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿ ಹೇಮಂತ್ ಚಂದನ ಗೌಡರ್ ಅವರಿದ್ದ ಏಕಸದಸ್ಯಪೀಠ ಈ ಆದೇಶ ನೀಡಿದೆ.
ಒಂದು ವೇಳೆ ಅಪರಾಧ ಎಸಗಿದ್ದಾರೆ ಎಂದು ಸಾಬೀತುಪಡಿಸಬೇಕಾದರೆ, ಆ ನಗದನ್ನು ಕಳವು ಮಾಡಿರುವುದು ಇಲ್ಲವೇ ವಂಚನೆ ಎಸಗುವ ಮೂಲಕ ಗಳಿಸಲಾಗಿದೆ ಎಂಬುವುದನ್ನು ಖಚಿತಪಡಿಸಿಕೊಂಡಿರಬೇಕು ಎಂದು ಹೇಳಿದೆ. ಜತೆಗೆ ಸೆಕ್ಷನ್ 98ರಡಿ ಶಿಕ್ಷಾರ್ಹ ಅಪರಾಧವು ನಾನ್-ಕಾಗ್ನಿಜೇಬಲ್ ಅಪರಾಧವಾಗಿದೆ. 1973ರ ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 155(2) ರ ನಿಬಂಧನೆಗಳ ಪ್ರಕಾರ, ಪೊಲೀಸರು ನಾನ್-ಕಾಗ್ನಿಜೇಬಲ್ ಅಪರಾಧವನ್ನು ತನಿಖೆ ಮಾಡಲು ಪ್ರಯತ್ನಿಸಿದಾಗ, ಮೊದಲು ಮ್ಯಾಜಿಸ್ಟ್ರೇಟ್ ಅವರಿಂದ ಪೂರ್ವಾನುಮತಿ ಪಡೆಯುವುದು ಕಡ್ಡಾಯವಾಗಿದೆ.
ಆರೋಪಪಟ್ಟಿ ಸೇರಿ ದಾಖಲೆಯಲ್ಲಿರುವ ವಸ್ತುಗಳು, ದೊರೆತ ನಗದು ಕದ್ದ ಅಥವಾ ವಂಚನೆಯಿಂದ ಪಡೆಯಲಾಗಿದೆಯೇ ಎಂಬ ಬಗ್ಗೆ ಸಮಂಜಸ ನಂಬಿಕೆ ಅಥವಾ ಅನುಮಾನವಿದೆ ಎಂದು ಸೂಚಿಸುವುದಿಲ್ಲ ಎಂದು ಹೇಳಿದೆ.